Monday, May 15, 2017

ಸಹ್ಯಾದ್ರಿ ತಪ್ಪಲಲ್ಲಿ ಬಾಲ್ಯದ ನೆನಪುಗಳ ಮೆಲುಕು, ಬಿಸಿ ಬಿಸಿ ಕಾಪಿಯ ಜೊತೆ

ಬಹಳ ದಿನವಾದರೂ ಸಂಧ್ಯಾವಂದನೆ ಮಾಡದೆ ಒಮ್ಮೆಲೇ ದೇವರ ಮೇಲೆ ಭಕ್ತಿ ಬಂದು ಜಪ ಮಾಡಲು ಕುಳಿತ ಬ್ರಹ್ಮಚಾರಿಯಂತೆ ಬಹಳ ದಿನಗಳ ನಂತರ ಬ್ಲಾಗ್ ಇಂದ ದೂರ ಇದ್ದವನು ಇತ್ತೀಚಿಗೆ ಹೋಗಿ ಬಂದ ನಮ್ಮಮ್ಮನ  ಊರು ನಾರ್ವೆಯ ಪ್ರಯಾಣದ ಅನುಭವ ಬರೆಯಲು ಕುಳಿತಿದ್ದೇನೆ.

ಶಿವಮೊಗ್ಗದಿಂದ 76kms ದೂರದಲ್ಲಿ ನರಸಿಂಹರಾಜಪುರದ ಮಾರ್ಗವಾಗಿ ಹೊರಟರೆ ಸಿಗುವುದು ನಾರ್ವೆ ಎಂಬ ನಮ್ಮಜ್ಜಿ ಊರು.ವೀಕೆಂಡಿನ ಬೆಳಗ್ಗೆ ಎದ್ದ ತಕ್ಷಣ ಚಳಿಯಲ್ಲಿ ವಾಯು ವಿಹಾರಕ್ಕೆ ಹೊರಟೆ.. ಮಾವನ ಮಗ ವಿಶ್ವಾಸ್ ಮತ್ತು ಬಾಲ್ಯ ಸ್ನೇಹಿತ ಸುಬ್ಬು ಬೆಳಗಿನ ಮಂಜಿನ ಹನಿಗಳನ್ನು ತಡೆಯಲು ಟೋಪಿ ಹಾಕಿದ್ದರು.. ಅಲ್ಲಿ ಇದ್ದೋರಿಗೆ ಚಳಿ ತಡಿಯೋಕೆ ಆಗುತಿಲ್ಲ ಅಂದರೆ ನಂಗೆ ಹೇಗೆ ಆಗುತ್ತೆ ಅಂತ ಓಡೋಡಿ ವಾಪಾಸ್ ಬಂದು ನನ್ನ ಬ್ಯಾಗಿನಲ್ಲಿ ಹುಡುಕಿ ಕ್ಯಾಪ್ ಹಾಕಿಕೊಂಡು ಹೊರಟೆ.. ಹೀಗೆ ನಡೆಯುವಾಗ ಒಂದಿಷ್ಟು ಲೋಕಾರೂಢಿ ಮಾತುಗಳು..ಈಗಿನ ಜೀವನಕ್ರಮದಲ್ಲಿ ವ್ಯಾಯಮ ಎಷ್ಟು ಮುಖ್ಯ.. ಕರ್ನಾಟಕದ ಹೊಲಸು ರಾಜಕಾರಣ.. ನೆನ್ನೆ ಬಂದಿದ್ದ ಮಳೆಯ ಆರ್ಭಟ ಎಷ್ಟೋ ಜೋರು ಮಾರ್ರೆ.. ಒಂದೇ ಮಳೆಗೆ ರೋಡ್ ಗೆ ಹಾಕಿದ್ದ ಕಳಪೆ ಟಾರ್ ನ ಅವಸ್ಥೆ.. ಅಲ್ಲಿನ ಜನರ ಬೆಳಗಿನ ಶಿಸ್ತಿನ ಜೀವನ.. ಹೀಗೆ ಹೋಗ್ತಾ ಹೋಗ್ತಾ MTRಗೆ (ಮಾವಳ್ಳಿ ಟಿಫನ್ ರೂಮ್ ಅಲ್ಲ ಮರಿತೊಟ್ಲು ರೋಡ್) ಹೋಗ್ಬೇಕಾಗಿದ್ದ ನಾವು 1.5  kms ನ ಕಲ್ಲುಬೆಂಚಿನ ಮೇಲೆ ಸಾಕಾಗಿ ಕುಳಿತೆವು.. ಇನ್ನೊಂದಿಷ್ಟು ಹರಟೆ ಹೊಡೆದು.. ವಾಪಾಸ್ ಬಂದ್ವಿ.. ಒಳ್ಳೆ ಚಳಿಗೆ ಬಿಸಿ ಬಿಸಿ ಕಾಪಿ ಕುಡಿದು.. ಏನ್ ಮಾಡೋದು ಅಂತ ಯೋಚ್ನೆ ಮಾಡ್ಬೇಕಾದ್ರೆ.. ನನ್ನೊಳಗಿನ ಬಾಲ್ಯದ ನೆನಪುಗಳು ಬಿಸಿ ನೀರು ಕಾಸುವ ಹಂಡೆ ಮುಂದೆ ತಂದು ಬಿಟ್ಟಿತು..

ಏನು ಅಂತೀರಾ.. ಗೇರುಬೀಜ ಸುಡೋಣ ಅನ್ನಿಸಿತ್ತು.. ಪಾಪಣ್ಣ ಮಾವ ಕೊಟ್ಟ ಗೂಗಲ್ ಮ್ಯಾಪಿನ ಮಾರ್ಗದರ್ಶನದಂತೆ ಗೇರುಬೀಜದ ಚೀಲ ಹುಡುಕಿ ಅಮ್ಮನ ನೆರವಿನಿಂದ ಒಂದಿಷ್ಟು ಗೇರುಬೀಜ ಸುಟ್ಟೆ.. ಏನು taste ರೀ ಅದು. ಅಹ ತಿಂದೋನಿಗೆ ಗೊತ್ತು.. ಅದರ ವಾಸನೆ ಅತ್ಯದ್ಭುತ.. ಆಗ ಅನ್ಕೊಂಡೆ.. ಮೆಸೇಜ್ ಥರ ವಾಸನೆಯನ್ನು ವಾಟ್ಸಪ್ಪ್ನಲ್ಲಿ ಕಳಿಸೋ ಹಾಗೆ ಇರ್ಬೇಕಿತ್ತು ಅಂತ!


ಅದಾದ ನಂತರ ನನ್ನವಳಿಗೆ ಮಲೆನಾಡು ಹೊಸದಲ್ಲದಿದ್ದರೂ ನಮ್ಮಜ್ಜಿ ಊರು ಹೊಸದು.. ಹಾಗಾಗಿ ಅವಳಿಗೆ ಊರು ತೋರಿಸುವ ತವಕ ನನ್ನದು.. ನಮ್ಮ ಬಾಲ್ಯದ ಪ್ರತಾಪಗಳೆನ್ನೆಲ್ಲ ಒಂದೊಂದಾಗಿ ಹೇಳುತ್ತಾ, ನನ್ನನ್ನೇ ನಾನೇ ಒಬ್ಬ ಹೀರೋ ಥರ ಹೇಳ್ಕೊಳ್ಳುತ್ತಾ ಹೊರಟಿದ್ದು ನಮ್ಮಜ್ಜಿ ಮನೆಯ ಹಿಂಭಾಗ ಇರುವ ತುಂಗೆ ನದೀ ತೀರಕ್ಕೆ.. ಅಲ್ಲೊಂದು ನವಿಲು ಹಾರುವುದನ್ನು ನೋಡಿದೆ..ಅದನ್ನು to-do  ಲಿಸ್ಟ್ ನಲ್ಲಿ ಹಾಕಿ ನದಿಯನ್ನು ದಾಟಿ ಮರೆತು ಹೋಗಿದ್ದ ಕಲ್ಲಾಟ (5 ಕಲ್ಲುಗಳು 10 ವಿಭಿನ್ನ ಹಂತಗಳ ಆಟ) ಆಡಿದೆವು..ನದಿಯಲ್ಲಿ ಆಟ ಆಡಿ ಬಂದು ನೋಡಿದರೆ ಹಲಸಿನ ಹಪ್ಪಳ ತಯಾರಿಸುವ ಲೆಕ್ಕ ನಡೀತಿತ್ತು.. ಬಾಯಲ್ಲಿ ಮತ್ತೆ ನೀರ್ ಬಂತು ನೋಡಿ.. ಹಪ್ಪಳಕ್ಕೋಸ್ಕರ ಅಲ್ಲ, ಅದನ್ನು ತಯಾರಿಸುವ ಮೊದುಲು ಮಾಡುವ ಹಪ್ಪಳದ ಬೊಟ್ಟುಗೋಸ್ಕರ.. ಏನ್ ಟೇಸ್ಟ್ ಅಂತೀರಾ. ನೆನುಸ್ಕೊಂಡ್ರೆ ಈಗ್ಲೂ ಬಾಯಲ್ಲಿ ನೀರ್ ಬರುತ್ತೆ ಕಣ್ರೀ. ಸವಿದೋರಿಗೆ ಗೊತ್ತು ಅದರ ಸವಿರುಚಿಯ. ಹಪ್ಪಳ ತಯಾರಿಸುವ ಕಾರ್ಯ ಪ್ರಾರಂಭ ವಾಯಿತು.. ಕದ್ದು ಮುಚ್ಚಿ ಬೊಟ್ಟುಗಳ್ಳನ್ನು ತಿಂದು ನೂರರ ಗಡಿ ಮುಟ್ಟಬೇಕಿದ್ದ ಹಪ್ಪಳಗಳ ಸಂಖ್ಯೆ ಅಂತೂ ಇಂತೂ ಮುಟ್ಟಿದ್ದು 67 ಮಾತ್ರ.. ಅಮ್ಮ ಅಷ್ಟಕ್ಕೇ ಖುಷಿ ಪಟ್ಟರು.



ಮಧ್ಯಾಹ್ನ ವೀಣತ್ತೆ ಮಾಡಿದ ಭರ್ಜರಿ ಊಟದ ನಂತರ ಮಲಗೆದ್ದು (ಗಸಗಸೆ ಪಾಯಸದ ಪ್ರಭಾವ) ಹೊರಟಿದ್ದು ದೋಣಿಗಂಡಿಯ ತೂಗುಸೇತುವೆಯ ಕಡೆಗೆ.. ಸಮಯಕ್ಕೆ ಸರಿಯಾಗಿ ಕಾರಿನಲ್ಲಿ ಗುನುಗುನಿಸುತ್ತಿತ್ತು ಇತ್ತೀಚಿಗೆ ಬಿಡುಗಡೆಯಾದ ಕಿರಿಕ್ ಪಾರ್ಟಿಯ "ತೂಗು ಮಂಚದಲ್ಲಿ ಕೂತು" ಎಂಬ ಹಾಡು... ತೂಗು ಸೇತುವೆಯಲ್ಲಿ ನಿಂತಾಗ ಆಗಾಗ ಬರುತಿದ್ದ ಬೈಕ್ ಸವಾರರಿಗೆ ಬೈದುಕೊಳ್ಳುತ್ತಾ (ಆವಾಗಲೇ ಗೊತಾಗಿದ್ದು ಸೇತುವೆ ತೂಗುತ್ತೆ ಅಂತ) ನಿಸರ್ಗದ ತುಂಗೆ ತಟದ ರಮಣೀಯ ಸದೃಶವನ್ನು ನೋಡುತ ನಿಂತೇವೆ.. ಇತ್ತೀಚೆಗೆ ಪ್ರಾರಂಭವಾಗಿರುವ ಹೊಸ ಶಾಸ್ತ್ರದಂತೆ ಒಂದೆರೆಡು ಸೆಲ್ಫಿಗಳನ್ನೂ ಕ್ಲಿಕ್ಕಿಸಿದೆವು.

ಅಲ್ಲೇ ಚೌಡೇಶ್ವರಿಯ ದರ್ಶನ ಪಡೆದು ಕೊಪ್ಪದ ಬಸ್ ಸ್ಟ್ಯಾಂಡಿನ ಎದುರುಗಡೆ ಇರುವ ಗಜಾನನ ಭವನದ ಮಸಾಲೆ ದೋಸೆ ಸವಿದು ಸಂಗೀತ ಚಾಟ್ಸ್ನಲ್ಲಿ ಮಸಾಲೆ ಪುರಿ ಕಾರ್ನ್ ಮಸಾಲೆ ತಿಂದು ಬರುವಾಗ ಪಾಪಣ್ಣ ಮಾವ ಹೇಳಿದ ಕಾಡುಪ್ರಾಣಿಗಳ ಕಥೆ ಹೀಗಿದ್ದವು..  ಗಣೇಶ ಮಂಟಪ ಕಟ್ಟುವಾಗ ಅತಿಥಿಯಾಗಿ ಬಂದ ಹಾವುಗಳು.. ಮಾವ ಬೈಕ್ನಲ್ಲಿ ಬರುವಾಗ ಮುಳ್ಳು ಹಂದಿ ಎದುರುಗಡೆ ಸಿಕ್ಕಿದ್ದು ಹಾಗು ಅದು ಮುಳ್ಳುಗಳನ್ನು ಹಾರಿಸಿದ್ದು... ಮೊನ್ನೆ ತಾನೇ ಪಕ್ಕದ ಊರಲ್ಲಿ ಚಿರತೆ ಬಂದಿರಿವುದು ಹೀಗೆ ಹತ್ತು ಹಲವು.... ಅದೇ ಭಯದಲ್ಲಿ ನಿಧಾನವಾಗಿ ಕಾರಿನ ಗ್ಲಾಸುಗಳನ್ನ ಏರಿಸುತ್ತಾ.. ಉಸ್ಸಪ್ಪ ಅಂತೂ ಆ ಕಗ್ಗತ್ತಲೆಯಲ್ಲಿ ಮನೆ ಸೇರಿದೆವು..

ಬೆಳಗ್ಗೆ ಎದ್ದು ಟು-ಡು ಲಿಸ್ಟ್ನಲ್ಲಿ ಇದ್ದ ನವಿಲಿನ ಹಾರಾಟ ಜ್ಞಾಪಕ ವಾಗಿದ್ದೆ ತಡ.. ವಿಶ್ವಾಸ್ ಮತ್ತು ನಾನು ಏನೋ ಸಾಧನೆ ಮಾಡುವ ನಿಟ್ಟಿನಲ್ಲಿ ಹೊರಟಿದ್ದು ಹೊಳೆದಂಡೆಯಲ್ಲಿ ಬಿದ್ದ ನವಿಲು ಗರಿಗಳನ್ನು ಹುಡುಕುವುದಕ್ಕೆ.. ಹೊಳೆ ದಂಡೆಗೆ ಹೋಗುವ ವರೆಗೂ ಇದ್ದ ಧೈರ್ಯ ಅಲ್ಲಿಗೆ ಹೋದ ಮೇಲೆ ನಿರ್ಜನ ಪ್ರದೇಶ ನೋಡಿ ಸ್ವಲ್ಪ ಭಯವಾಯಿತು.. ಹಿಂದಿನ ದಿನ ಕೇಳಿದ್ದ ಕಥೆಗಳ ಪ್ರಭಾವ ಇರ್ಬಹುದು.. ಆ ಭಯ ಕೆಲವು ನವಿಲುಗಳನ್ನು ನೋಡಿದ ಮೇಲೆ ಮಾಯವಾಯಿತು... ಆ ನವಿಲುಗಳ ಹಾರಾಟ ಮತ್ತು ಆಟಗಳನ್ನು ನೋಡುತ ಫೋಟೋ ಕ್ಲಿಕ್ಕಿಸುವುದೇ ಮರೆತು ಹೋಯಿತು.. ಸ್ವಲ್ಪ ಹುಚ್ಚುತನ ಎನಿಸಿದರೂ ಗರಿ ಹುಡುಕುವ ಕಾರ್ಯ ಮುಂದುವರಿಯಿತು.. ಆದರೆ ನಮ್ಮ ಕರ್ಮಕ್ಕೆ ಒಂದೂ ಸಿಗಲಿಲ್ಲ.. ನಮ್ಮಲ್ಲಿರುವ ಭಯ ಇನ್ನೇನು ಸಂಜೆ ಸೂರ್ಯನಂತೆ ಮುಳುಗಿತಿರುವಾಗ ಅಮಾವಾಸ್ಯೆಯ  ಕತ್ತಲಂತೆ ಮತ್ತೆ ಭಯ ತಂದದ್ದು ಅಲ್ಲಿ ಬಿದ್ದಿದ್ದ ಕೆಲವು ಮುಳ್ಳು ಹಂದಿಯ ಮುಳ್ಳುಗಳು.. ಅಲ್ಲಿಗೆ ನಾನು ವಿಶ್ವಾಸನಿಗೆ ಹೇಳಿದೆ ಸಾಕು  ಮಾರಾಯ ಈ  ಗರಿಗಳ ಹುಡುಕಾಟ ಎಂದು.. ಅವನು ಆ ಮುಳ್ಳುಗಳ್ಳನ್ನು ನೋಡಿ ಇವು ತುಂಬ ಹಳೆಯವು ಎಂದ ಮೇಲೆ ಸ್ವಲ್ಪ ಧೈರ್ಯ ಬಂತು.. ಗರಿಗಳ  ಹುಡುಕಾಟ ಮುಂದುವರಿಯಿತು.. ಅಂತೂ ಇಂತೂ ನಮಗೆ ಸಿಕ್ಕಿದ್ದು ಎರಡು ನವಿಲು ಗರಿಗಳು ಮಾತ್ರ.. ಯುದ್ಧ ಗೆದ್ದ ಸಂಭ್ರಮದಂತೆ ವಾಪಾಸ್ ಬರುವಾಗ ಅಲ್ಲೇ ಕುಂಟುತ್ತಾ ಇದ್ದ ಒಂದ್ ಹಕ್ಕಿಯನ್ನು ನೋಡಿದೆವು.. ಹೃದಯ ಕಲಕುವ ದೃಶ್ಯ. ಸ್ವಲ್ಪ ದಿನಗಳಷ್ಟೇ ಆಗಿತ್ತೇನೋ ಹುಟ್ಟಿ.. ಆಗ ತಾನೇ ಪ್ರಪಂಚವನ್ನು ಕಂಡ ಆ ಹಕ್ಕಿಗೆ ಕಾಲು ಪೆಟ್ಟಾಗಿ ಹಾರಲು ಆಗುತಿರಲಿಲ್ಲ.. ಇಬ್ಬರು ಪಣ ತೊಟ್ಟೆವು ಪಾಪ ಆ ಹಕ್ಕಿಗೆ ಏನಾದ್ರು ಸಹಾಯ ಮಾಡಬೇಕು ಎಂದು.. ಅಪರಿಚಿತರನ್ನು ಮಕ್ಕಳು ಕಂಡಾಗ ಅತ್ತು ದೂರ ಹೋಗುವಂತೆ ಆ ಹಕ್ಕಿಯು ನಮ್ಮನ್ನು ಕಂಡು ಕುಂಟ್ಟುತ್ತ ದೂರ ಹೋಗುತಿತ್ತು.. ಆದರೆ ನಾವು ಮಕ್ಕಳು ಅತ್ತರೂ ಅದರ ಶುಶ್ರೂಷೆಗೆ ಮುಂದಾಗುವ ವೈದ್ಯರಂತೆ ಅದನ್ನು ಮೃದುವಾಗಿ ಹಿಡಿದು ಅದರ ಕಾಲಿನ ನೋವು ಗುಣವಾಗುವ ತನಕ ಶುಶ್ರೂಷೆ ಮಾಡುವ ಸಂಕಲ್ಪ ಮಾಡಿದೆವು. ಮನೆಗೆ ತಂದು ಹಲವು ಹಣ್ಣುಗಳನ್ನು ಕೊಟ್ಟು.. ಧಾನ್ಯಗಳನ್ನು ಹಾಕಿ ರಾಜ ಮರ್ಯಾದೆಯಲ್ಲಿ ನೋಡಿಕೊಂಡೆವು.. ಅದೂ ಕೂಡ ಖುಷಿ ಖುಷಿಯಾಗಿ ಚಿಲಿ ಪಿಲಿ ಗುಟ್ಟಲು ಶುರು ಮಾಡಿತು. ಮನುಷ್ಯ ಸಹಜ ಹುಣದಂತೆ ಅದಕ್ಕೊಂದು ನಾಮಕರಣ ಮಾಡಿದೆವು.. "ಮುದ್ದು" ಎಂದು. ನಂತರ ಅಲ್ಲೇ ಹತ್ತಿರ ಇರುವ ಬಂಗ್ಲೆಗುಡ್ಡಕ್ಕೆ ಹೋಗಿ ದೂರದಲ್ಲಿ ಕಾಣುವ ಕುದುರೆಮುಖ ಬೆಟ್ಟದ ಸಾಲುಗಳನ್ನು ನೋಡಿ ಆನಂದಿಸಿದೆವು.



ನಂತರ ಹೊರಟಿದ್ದು ಕರ್ನಾಟಕದ ಕಾಶ್ಮೀರ ಎಂದು ಕರೆಯುವ ಕೊಪ್ಪಕ್ಕೆ. ಅಲ್ಲೇ ಶೃಂಗೇರಿಗೆ ಹೋಗುವ  ದಾರಿಯಲ್ಲಿರುವ ನಾಗರಾಜಮಾವನ ಮನೆಗೆ ಹೋಗಿ.. ಅತ್ತೆ ಮಾಡಿದ ಭರ್ಜರಿ ಊಟದ ನಂತರ ಸಂಜೆ ಕಾಪಿಯ ಜೊತೆಯಲ್ಲಿ ಬಿಸಿ ಬಿಸಿಯಾದ ಹಲಸಿನ ಹಣ್ಣಿನ ಮುಳುಕವನ್ನು ಮೇಯ್ದುಮೇಲೆ ಒಂದೆರೆಡು ಗೇರುಹಣ್ಣುಗಳನ್ನು ತಿಂದೆವು.



ಆಗ ನಮ್ಮನ್ನು ಕರೆದದ್ದು ಕೆಸವೆಗೆ ಹೋಗುವ ದಾರಿ ಯಲ್ಲಿರುವ ಕಮಂಡಲ ಶ್ರೀಗಣಪತಿ ದೇವಸ್ಥಾನ.. ಸುತ್ತ ದಟ್ಟವಾದ ಅರಣ್ಯಮಧ್ಯದಲ್ಲಿ ನಿರರ್ಗಳವಾಗಿ ಗಣಪತಿಪಾದದ ಕೆಳಗೆ ಉಧ್ವವವಾಗಿ ಹರಿಯುತಿರಿವ ಬ್ರಾಹ್ಮಿ.. ಪಾರ್ವತಿಯು ತನ್ನ ಶನಿಕಾಟ ನಿವಾರಣೆಗಾಗಿ ತಪಸ್ಸು ಮಾಡಲು ನಿರ್ಧರಿಸಿದಾಗ ಮೊದಲು ಮಾಡುವ ಗಣಪತಿ ಪೂಜೆಗೆಂದು ಸೃಷ್ಟಿಕರ್ತ ಬ್ರಹ್ಮ ತನ್ನ ಕಮಂಡಲದಿಂದ ಈ ನೀರಿನ ಉಗಮ ಸ್ಥಾನವಲ್ಲೂ ಸೃಷ್ಟಿಸಿದನೆಂದು ಪ್ರತೀತಿ ಹಾಗು ಈ ನೀರಿನಲ್ಲಿ ಸ್ನಾನವನು ಮಾಡುವುದರಿಂದ ಹಲವು ಪಾಪಗಳು ಕಳೆದುಹೋಗುತ್ತವೆ ಎನ್ನುವ ನಂಬಿಕೆ  ಕೂಡ ಇದೆ.


ಸಂಜೆಯಾದ್ದರಿಂದ ಅಲ್ಲೇ ನಾರ್ವೆಗೆ ಹೋಗುವ ದಾರಿಯಲ್ಲಿರುವ ಅಂದಗಾರು ಹತ್ತಿರ ಇರುವ ಸೂರ್ಯಾಸ್ಥ ದರ್ಶನ ಸ್ಥಳಕ್ಕೆ ಹೋಗಿ ಪ್ರಕೃತಿಯ ಸೌಂದರ್ಯವನ್ನು ಮತ್ತೆ ಕಣ್ಣುತುಂಬಿಕೊಟ್ಟೆವು

ಒಟ್ಟಿನಲ್ಲಿ.. ಈ ಬೆಂಗಳೂರಿನ ಯಾಂತ್ರಿಕ ಬದುಕಿಗೆ ಹೊಸದಾಗಿ ಕಾಲಿಟ್ಟ ನವಜೋಡಿಗೆ ಅಜ್ಜಿಯ ಆಶೀರ್ವಾದ ಪಡೆಯುವ ನಿಟ್ಟಿನಲ್ಲಿ ಸಹ್ಯಾದ್ರಿ ತಪ್ಪಲಿಗೆ ಹೋಗಿ ನಮ್ಮಲ್ಲಿದ್ದ ಬಾಲ್ಯದ ನೆನಪುಗಳನ್ನು ಬಿಸಿ ಬಿಸಿ ಕಾಪಿಯ ಜೊತೆ ಮೆಲುಕು ಹಾಕಿದೆವು

6 comments:

  1. Wah... ಅದ್ಭುತವಾಗಿದೆ ಕಣೊ article ... ನಿನ್ನೊಳಗೂ ಕವಿಮನಸಿದೆ ಅಂತ ಗೊತ್ತಾಯ್ತು... ನಾರ್ವೆ ಊರಿನ ಪ್ರಭಾವನೆ ಅಂತಹದ್ದು keep it up

    ReplyDelete
  2. Madadiyondige Modala Malenadina varnane tumba Chennagide..superb..
    Nanna Madidiyanna karidukondu hoguwa aaseyagide
    Really Nice along Nice PICs

    ReplyDelete
  3. Chennagide Karthik blog. Hakkiya hesaru Green bee eater. Hakki gunavaayitha? Yenmadudri adanna?

    ReplyDelete
  4. super I think u missed on ಶ್ರೀ ಗಡ್ಡೆ ರಾಮೇಶ್ವರ ದೇವಸ್ಥಾನ ಕುರುವ

    ReplyDelete